Sunday 1 April 2018

ಹೊಂಗನಸ ಚೆಲುವೆ

ಹೊನ್ನಿನ ಬಣ್ಣದ ಹೊಂಗನಸ ಚೆಲುವೆ
ಹೊರಡಿಸಿದಳೊಂದು ಪ್ರೇಮದ ನಾದ
ಇವಳು ಹುಣ್ಣಿಮೆಯ ರಾತ್ರಿಯ ಚಂದ್ರಿಕೆ
ನನ್ನೆದುರೆಳೆದಳು ಪ್ರೀತಿಯ ಜವನಿಕೆ

ಅವಳನ್ನ ಕಂಡ ಮೇಲೆ ಬೀಸಿತೊಂದು ತಂಬೆಲರು
ಅದಕ್ಕೂ ಮುಂಚೆ ನಾನೊಂದು ಮೊಗರು
ಹಿತವೋ ಅಹಿತವೋ ಅರಿಯಲಾರೆ
ಏನೀ ಭಾಷೆಗೂ ನಿಲುಕದ ಭಾವ ಲಹರಿ

ಇವಳ್ಯಾರೋ ಮಾಯಾಂಗಿಣಿ ಇರಬೇಕು
ಕವಿ ಹೃದಯವ ಕದ್ದೊಯ್ಯಲು ಎಷ್ಟು ಧೈರ್ಯವಿರಬೇಕು
"ಎಲೆಲೆ ಹೆಣ್ಣೇ ಕೇಳಿಲ್ಲಿ" ಏನೋ ಹೇಳಲು ಬಾಯ್ತೆರೆದೆ
ನನ್ನೆಡೆಗೆ ನೋಡಿ ನಕ್ಕಳು
ಬಾಯ ಮಾತು ಒಳಗೊಳಗೇ ಹೋಯಿತು
ನನ್ನ ಕಣ್ಣ ತುಂಬಾ ಅವಳ ಪ್ರತಿಚ್ಛಾಯೆ
ತುಂಬಿಹೋಯಿತು

                            © ಪ್ರೇಮಂ ಪರಬ್ರಹ್ಮ

Wednesday 7 March 2018

ಹೆಣ್ಣೆಂದರೆ

ಒಲೆ ಉಗುಳುವ ಹೊಗೆ ಎದುರು ಮಾತನಾಡುವಳು ಹೆಣ್ಣು
ಕಾಮುಕ ಪುರುಷನಿಗೆ ಇವಳೊಂದು ಹಣ್ಣು
ಇವಳ ಕಂಡು ಸಹನೆ ಕಲಿಯಿತು ಧರಣಿ
ಕಷ್ಟಕ್ಕೂ ಸುಖಕ್ಕೂ ಎಲ್ಲದಕೂ ಅಣಿ

ಹದಿಹರೆಯದ ವಯಸಲಿ ತಂದೆ ತಾಯಿಯ ತೊರೆವಳು
ಯಾರದೋ ಮನೆಯೊಳಗೆ ದೀಪ ಹಚ್ಚುವಳು
ಪ್ರತಿಕ್ಷಣವೂ ಪತಿಯ ಜೊತೆ ಇರುವಳಿವಳು
ಬಾಳ ದೋಣಿಗೆ ಇವಳು ಹುಟ್ಟು ಹಾಕುವಳು

ನವಮಾಸ ಗರ್ಭದಲ್ಲಿ ಭಾರ ಹೊರುವಳು
ಭಾರವಲ್ಲ ಅದು ಅವಳಿಗೆ ಬಂಗಾರ
ತನ್ನ ಕಂದನಿಗೆ ಜನ್ಮ ನೀಡುತ್ತಾ ತಾ ಮರುಜನ್ಮವ ಪಡೆವಳು
ತಾ ಸೋತರೂ ಸತ್ತರೂ ತನ್ನ ಕಂದನ ಕಾಯುವಳು
ಯಾರಾದರೂ ಕೇಳಿದರೆ "ಹೆಣ್ಣು ಯಾರೆಂದು?"
ಕೈ ಮುಗಿದು ಹೇಳು "ಅವಳು ದೇವರೆಂದು"

                           © ಪ್ರೇಮಭಕ್ತ

ರೋಗದ ಭೂತ

ದೇಹವಿದು ಒಂದು ರೋಗಗಳ ಗೂಡು
ಸ್ವಲ್ಪ ಹೆಚ್ಚು ತಿಂದರೆ ಕೇಳಬೇಡಿ ತಿಂದವನ ಪಾಡು
ತುಸು ಕಡಿಮೆ ತಿಂದರೆ ಶುರು ನೋಡಿ ಒಂದು ಹಾಡು
ಏನು ಮಾಡಿದರೂ ದೇಹದಲ್ಲಿ ರೋಗವೇ ನೋಡು

ಚೂರು ದೂರ ನಡೆದರೆ ಕಾಲು ನೋವಿನ ಗೋಳು
ಹೆಚ್ಚು ಕೆಲಸ ಮಾಡಿದರೆ ಮೈ ಕೈ ನೋವನ್ನ ಕೇಳು
ಸಿಹಿ ಇಷ್ಟವೆಂದರೆ ಮಧುಮೇಹದ ಶಿಕ್ಷೆ
ಉಪ್ಪುಪ್ಪು ಉಂಡರೆ ರಕ್ತದೊತ್ತಡದ ಪರೀಕ್ಷೆ

ನಮ್ಮ ನಾಲಿಗೆಗೆಂದು ಏನೂ ತಿನ್ನುವಂತಿಲ್ಲ
ವೈದ್ಯರ ಕೇಳದೆ ಏನೂ ಮಾಡುವಂತಿಲ್ಲ
ಹಗಲಿನಲ್ಲಿ ಇರುಳಿನಲಿ ದುಡಿಯುವುದು
ಹಣವನ್ನೆಲ್ಲ ವೈದ್ಯರ ಬಳಿ ಸುರಿಯುವುದು

                         © ಶ್ರೀಕಾಂತ ಬಣಕಾರ

Tuesday 6 March 2018

ಕವಿತೆ

ಇವಳು ಸುಂದರಿ ಸುರ ಸುಂದರಿ
ಇವಳಿಗರ್ಪಿಸಬೇಕು ಅಕ್ಷರದ ಮಾಲೆ
ಚಂದದಿ ಹೆಣೆಯಿರೆ ಅವಳಿಷ್ಟದ ಮಾಲೆ
ಪದದಿಂದ ಪದಕ್ಕೊಂದು ಇರಲಿ ಅನುಬಂಧ
ಪದದಲ್ಲಿ ಪ್ರಾಸವಿದ್ದರೆ ಬಲು ಅಂದ
ಇವಳೊಲಿವುದು ಭಾಷೆಯ ಭಕ್ತರಿಗೆ
ಇವಳೊಲಿವುದು ಸಾಹಿತ್ಯ ಶಕ್ತರಿಗೆ
ಭಾವನೆಗಳ ಬಳಸಿಹಳು ತನ್ನ ತೋಳಲ್ಲಿ
ಸಂಬಂಧ ಮುಡಿದಿಹಳು ತನ್ನ ಮುಡಿಯಲ್ಲಿ
ಪ್ರೇಮದ ಪ್ರೇಯಸಿ ಇವಳು
ಇವಳ ಕಾಲ್ಬೆರಳಿಗೆ ಕಾಲವೇ ಕಾಲುಂಗುರ
ಇವಳ ಕಿವಿಗಳಿಗೆ ಕೀರ್ತಿಯ ಓಲೆ
ಕವಿಯ ಕಲ್ಪನೆಗಳಿಗಿವಳು ದಾಸಿ
ನೀಡುವಳಿವಳು ಜ್ಞಾನವ ಒಳಗಣ್ಣ ತೆರೆಸಿ
ಯಾರೀ ಸುಂದರಿ ನಿಮಗೆ ತಿಳಿಯಿತೇ
ಇವಳು ಸಾಹಿತ್ಯದಪ್ರತಿಮ ಸುಂದರಿ "ಕವಿತೆ"

                      © ಶ್ರೀಕಾಂತ ಬಣಕಾರ

ರವಿ ಕಾಣದ್ದನ್ನು ಕವಿ ಕಂಡ

ಮೂಡಣದಿ ಕೆಂಪಾದ ಬಾನು ಕಂಡ
ರವಿಯ ಚುಂಬನಕೆ
ಬಾನು ನಾಚಿತೆಂದುಕೊಂಡ
ಅಚಲವಾದ ಶಿಖರಕ್ಕೆ
ಕುಚದ ರೂಪ ಕೊಟ್ಟ
ಬೀಸುವ ತಂಗಾಳಿಯನು
ಜೋಗುಳವೆಂದುಕೊಂಡ
ಹೆಣ್ಣಿನ ಮನದ ಲಕ್ಷ ಭಾವನೆಗಳನು
ಲಕ್ಷ್ಯಗೊಟ್ಟು ಅಕ್ಷರದಿ ತಿದ್ದಿದ
ಓಡಿ ಹೋಗುವ ನದಿಯ
ಪದಗಳಲ್ಲಿ ಬಂಧಿಸಿದ
ಹಕ್ಕಿಗಳ ಚಿಲಿಪಿಲಿ ಸದ್ದಿನಲಿ
ಸುಗಮ ಸಂಗೀತವ ಕೇಳಿದ
ಗುಂಪುಗೂಡಿದ ತಾರೆಗಳನು
ಅಕ್ಷತೆ ಎಂದು ಕೊಂಡ
ಮಧುವಣಗಿತ್ತಿ ಆ ಚಂದ್ರನೆಂದ
ಮುಂಗಾರುಮಳೆಯನು ಇನಿಯನೆಂದ
ಧರಣಿಯನು ಅವನು ಅಪ್ಪಿದುದ ಕಂಡ
ಹರಿಹರವಿರಿಂಚಿಗಳ
ಪುಸ್ತಕದಿ ಪೂಜಿಸಿದ
ಬೆಳೆದು ನಿಂತ ಪೈರನ್ನೊಮ್ಮೆ ನೋಡಿದ
ಭುವಿಯ ಮಗಳು ಮೈ ನೆರೆದಿಹಳು ಎಂದ
ಕೊನೆಗಾಲ ಇರಬಹುದು ಆ ರವಿಯ ಕಿರಣಗಳಿಗೆ
ಆದರದು ಇಲ್ಲ ಕವಿಯ ಕಲ್ಪನೆಗಳಿಗೆ

                        © ಶ್ರೀಕಾಂತ ಬಣಕಾರ

ದಾದಿಯರು

ದಾದಿಯರು ಇವರು ದಾದಿಯರು
ಬಿಳಿ ಬಟ್ಟೆಯ ತೊಟ್ಟ ಶಾಂತಿ ಪ್ರಿಯರು
ರೋಗಿಗಳೆಲ್ಲ ಇವರ ಮಕ್ಕಳು
ಅವರ ಪಾಲಿಗಿವರು ದೇವರು
ಹೊತ್ತಿಗೆ ಸರಿಯಾಗಿ ಕೈ ತುತ್ತನಿಕ್ಕುವರು
ರೋಗ ಹರಿಯುವ ತನಕ ಆರೈಕೆ ಮಾಡುವರು
ತಮಗಿರಬಹುದು ನೂರೆಂಟು ನೋವು
ಆದರೂ ಎಲ್ಲರ ಮುಂದೆ ಸದಾ ನಲಿವು
ವೈದ್ಯರ ಆಣತಿಯನ್ನಿವರು ಪಾಲಿಸುವರು
ಬಂದ ರೋಗಿಗಳಿಗೆ ಆರೋಗ್ಯ ನೀಡುವರು
ಇರಬಹುದು ಇವರು ಧನ್ವಂತರಿಯ ಮಕ್ಕಳು
ರೋಗಿಗಳಿಗೆ ಸದಾ ಇವರದೇ ನೆರಳು
ಇವರಿದ್ದರೇ ತಾನೇ ಜಗನಲಿವುದಿಂದು
ನಾ ಹರಸುವೆ ಇವರು ಸದಾ
ಹಸನ್ಮುಖಿಗಳಾಗಿರಲೆಂದು

                               © ಪ್ರೇಮಂ ಪರಬ್ರಹ್ಮ

ಜಾತ್ರೆಯ ಮುತ್ತು

ಕಂಡೆ ನಾನೊಂದು ಮುತ್ತು ಜಾತ್ರೆಯೊಳಗೊಂದು ಮುತ್ತು
ಅವಳ ಮೂಗುತಿಯಲ್ಲಿತ್ತು ಒಂದು ಮುತ್ತು
ಮುತ್ತಿನ ಸರದಿಂದ ಭೂಷಿತವಾಗಿತ್ತವಳ ಕತ್ತು
ಅವಳ ಕಾಣುತ್ತಿರುವಾಗ ಅನ್ನಿಸಿತು 'ನನಗಿನ್ನೂ ಎರಡು ಕಣ್ಣು ಬೇಕಿತ್ತು'

ಸಣ್ಣ ಅನುಮಾನ ಸುಳಿಯಿತೆನಗೆ ನೋಡಿದಾಗವಳ ಕೆನ್ನೆ
ಇರಬಹುದೇ ಇದು ಅತಿ ಕೋಮಲ ಬೆಣ್ಣೆ
ಅವಳ ಕೇಶರಾಶಿ ಶಿಖರದಿಂ ಕೆಳಗಿಳಿದ ಕರಿ ನೆರಳಂತಿತ್ತು
ಕಡುಗಪ್ಪು ಕೂದಲದು ಒಮ್ಮೆ ನನ್ನ ಸೋಂಕಿತ್ತು

ತುಟಿಗಳೆಡೂ ಹೊಳೆಯುತ್ತಿದ್ದವು ಹೂವಂತೆ
ಈ ಕಲ್ಪನೆಯ ಕವನದಲ್ಲಿ ದುಂಬಿ ನಾನಂತೆ
ತಿಲಕವಿತ್ತವಳ ಹಣೆಯಲ್ಲಿ ಹೇಗಂತ ಗೊತ್ತೆ
ಅದು ಪೂರ್ಣಚಂದಿರನಿಗೆ ಕೆಂಪು ಚುಕ್ಕಿಯ ಇಟ್ಟಂತೆ

ಅವಳು ಸೌಂದರ್ಯ ಲೋಕದಿಂದ ಕೆಳಗಿಳಿದ ಬಾಲೆ
ಕಣ್ಣಿನಲ್ಲೇ ತೋಡಿದ್ದಳು ಪ್ರೇಮದ ನಾಲೆ
ಅವಳ ಹೆಸರನೊಮ್ಮೆ ಕೂಗಿ ಹೇಳೆಲೆ ಕೋಗಿಲೆ
ನಂತರ ಹಾಡೋಣ ನಾವಿಬ್ಬರೂ ಒಮ್ಮೆಲೆ

                             © ಪ್ರೇಮ ಭಕ್ತ